DEVARA THUNTATA
-
TypePrint
- CategoryNon-Academic
- Sub CategoryFiction
- StreamPoetry-Fiction
ರಂಗನಾಥ ಕ.ನಾ. ದೇವರಹಳ್ಳಿ, ಶಿಕ್ಷಕರು ನನಗೆ ಪ್ರಿಯರಾಗಿದ್ದು ಒಂದು ಸಾಹಿತ್ಯಿಕ ಸಮಾರಂಭದಲ್ಲಿ! ಹಿರಿಯರನ್ನು ಗೌರವಿಸುವ ಅವರ ನಡೆ, ನುಡಿ ನನಗಿಷ್ಟವಯಿತು. ತುಂಬು ಪ್ರೀತಿಯಿಂದ ತಮ್ಮ “ಆಸೆಯ ಕಂಗಳು” ಕವನ ಸಂಕಲವನ್ನು ನೀಡಿ, ಓದಿ ಅಭಿಪ್ರಾಯ ತಿಳಿಸಲು ಕೋರಿದರು. ಆ ಕ್ಷಣವೇ ನಾನು ಅವರ ಕವನ ಸಂಕಲನದಲ್ಲಿ ಕಣ್ಣಾಡಿಸಿದ್ದೆ. ಅರವತ್ತು ಕವನಗಳಿದ್ದವು, ಕಾವ್ಯದ ಲಕ್ಷಣಗಳು ಗೋಚರಿಸಿದ್ದವು. ರಂಗನಾಥ ಸರ್ ಒಳಗೆ ಕವಿಯೊಬ್ಬ ಇರುವುದು ಖಾತ್ರಿಯಾಗಿತ್ತು! ಮೊಬೈಲ್, ವಾಟ್ಸ್ ಪ್ ಮೂಲಕ ಆಗಾಗ ಸಾಹಿತ್ಯಿಕ ಮಾತು-ಕತೆಗಳಾಗುತ್ತಿದ್ದವು.
ಒಬ್ಬ ಶಿಕ್ಷಕ ಕ್ರಿಯಾಶೀಲನಾಗಿದ್ದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ತುಂಬಾ ವಿರಳವಾಗಿ ಸಿಗುವ ಶಿಕ್ಷಕರಲ್ಲಿ ರಂಗನಾಥ.ಕ.ನಾ ಕೂಡಾ ಒಬ್ಬರು. ತಮ್ಮ ಕವಿತೆ, ಕಥೆ, ಸಂಘಟನೆ, ಇಲಾಖಾ ತರಬೇತಿಗಳು ಮತ್ತು ಮಕ್ಕಳ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಇವರು ಗುರುತಿಸಿಕೊಳ್ಳುವಂತಹ ವ್ಯಕ್ತಿಯಾಗಿ ರೂಪುಗೊಂಡಿದ್ದು ವಿಶೇಷ. ದೂರವಾಣಿ ಮೂಲಕ ರಂಗನಾಥರವರು “ಸರ್, “ದೇವರ ತುಂಟಾಟ“ ಎಂಬ ತಲೆ ಬರಹದ ಮಕ್ಕಳ ಪದ್ಯ ಸಂಕಲನ ತರುತ್ತಿದ್ದೇನೆ, ಅದಕ್ಕೆ ತಾವು ಮುನ್ನುಡಿ ಬರೆದು ಕಳಿಸಬೇಕು. ಇಲ್ಲ ಎನ್ನುವಂತಿಲ್ಲ” ಎಂದು ಹೇಳಿ, ನನ್ನನ್ನು ಪ್ರೀತಿಯಿಂದ ಒಪ್ಪಿಸಿದರು. ಕವಿತೆಗಳನ್ನು ತಕ್ಷಣ ಒಂದೇ ಉಸಿರಿಗೆ ಓದಿ ಮುಗಿಸಿದೆ. ಕೆಲವು ಕವಿತೆಗಳನ್ನು ಎರಡೆರಡು ಬಾರಿ ಓದಿದೆ, ಖುಷಿ ನೀಡಿದವು.ಇಲ್ಲಿಯ ಕವಿತೆಗಳ ಕುರಿತು ಮಾತನಾಡುವ ಮುನ್ನ ಮಕ್ಕಳ ಸಾಹಿತ್ಯದ ಕುರಿತು ಒಂದೆರಡು ಮಾತು ಹೇಳುವುದು ಸೂಕ್ತ ಎನ್ನಿಸಿತು.
ಮಕ್ಕಳ ಸಾಹಿತ್ಯವು ಮಕ್ಕಳ ಮನಸ್ಸನ್ನು ಅರಳಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಮಕ್ಕಳ ಮನಸನ್ನು ಮುದಗೊಳಿಸುತ್ತ, ಅವರ ಭಾವನೆಗಳನ್ನು ಕೆರಳಿಸುತ್ತ, ಅರಳಿಸುತ್ತ ತನ್ನ ಪರಿಸರವನ್ನು ಅರ್ಥ ಮಾಡಿಕೊಳ್ಳಲು ಪೂರಕವಾದ ಕವಿತೆ,ಕಥೆ,ನಾಟಕ, ಚಿತ್ರ, ಆಟಗಳೆಲ್ಲವು ಮಕ್ಕಳ ಸಾಹಿತ್ಯ ಎನ್ನಿಸಿಕೊಳ್ಳುತ್ತವೆ.ಸಹಜವಾಗಿ ಮಕ್ಕಳು ಆಕರ್ಷಣೆಗೊಳ್ಳುವುದು ಪ್ರಾಸಬದ್ಧ ಕವಿತೆಗಳಿಗೆ.ಪುಟ್ಟ-ಪುಟ್ಟ ಕವಿತೆಗಳನ್ನು ಹಾವ ಭಾವದ ಮೂಲಕ ಹೇಳುತ್ತಲೇ ಮಕ್ಕಳು ಅತ್ಯಂತ ಸಂಭ್ರಮ ಪಡುತ್ತಾರೆ. ಈ ರೀತಿ ಮಕ್ಕಳು ಸಂಭ್ರಮ ಪಡುವಂತೆ ಮಾಡುವ ಸಾಹಿತ್ಯವೇ ಮಕ್ಕಳ ಸಾಹಿತ್ಯ.
ಇಲ್ಲಿ ರಂಗನಾಥರ ಹಲವಾರು ಕವಿತೆಗಳು ಮಕ್ಕಳು ಸಂತಸದಿಂದ ಗುಣುಗುಡುವಂತಿವೆ.
ಅಮ್ಮ ಭೂಮಿಯ ಮೇಲೆ ಬಣ್ಣವು
ಹೇಗೆ ಬಂದಿತು ಹೇಳಮ್ಮ
ಮೊದಲು ಇದ್ದ ಬಣ್ನಗಳೆಷ್ಟು
ಯಾವುದೆಂದು ನೀ ಹೇಳಮ್ಮ!
ಮಗು ನಿತ್ಯ ತನ್ನ ಮನೆಯಲ್ಲೋ, ತನ್ನ ಶಾಲೆಯಲ್ಲೋ ಹಲವು ಬಣ್ಣದ ವಸ್ತುಗಳನ್ನು ನೋಡುತ್ತಿರುತ್ತದೆ. ಆ ವಸ್ತು ಕಣ್ಮನ ಸೆಳೆದಿರುತ್ತವೆ.ಅದು ಸಹಜವಾದ ಕುತೂಹಲವನ್ನು ಅಮ್ಮನ ಬಳಿ ಇಲ್ಲಿ ಪ್ರಶ್ನಿಸುತ್ತಿದೆ.ಅದನ್ನು ಕವಿತೆಯ ಮೂಲಕ ಅಮ್ಮನನ್ನು ಕೇಳುವ ಪರಿ ಇಲ್ಲಿ ಯಶಸ್ವಿಯಾಗಿದೆ.
ಹಾಗೆಯೇ “ ಆಗಸದಲ್ಲೂ“ ಎಂಬ ಕವಿತೆಯಲ್ಲಿ –
ಜಗವ ಬೆಳಗಲು ನಿಂತಿರೋ ತಾರೆಗೆ
ಸ್ವಾರ್ಥಗಳಿಲ್ಲ ಕೇಳ್ ಚಿನ್ನು||
ಸಾವಿರ ವರುಷ ತನ್ನನ್ನೇ ಬೇಯಿಸಿ
ನಮಗೆ ಬೆಳಕು ನೀಡ್ವವು ಕೇಳಿನ್ನು ||
ಚುಕ್ಕಿ ತಾರೆ ಚಂದ್ರಮರಲ್ಲಿ ಮನುಷ್ಯರಂತೆ ಸ್ವಾರ್ಥ ಗುಣಗಳಿಲ್ಲ, ಅವು ತಮ್ಮನ್ನೇ ಸುಟ್ಟುಕೊಂಡು ಜಗವ ಬೆಳಗುತ್ತವೆ, ಜಗಕೆ ತಂಪನೀಯುತ್ತವೆ ಎಂಬ ಕಲ್ಪನೆ ಸುಂದರವಾಗಿ ಮೂಡಿಬಂದಿದೆ. ರಂಗನಾಥರಲ್ಲಿನ ಕವಿ ಮಕ್ಕಳಿಗೆ ಎಂತಹ ವಸ್ತುಗಳು ಎಂಬುದನ್ನು ಚನ್ನಾಗಿ ಅರಿತುಕೊಂಡು, ಅಂತಹ ವಸ್ತುವನ್ನು ಆಯ್ಕೆಮಾಡಿಕೊಂಡು ಬಹಳಷ್ಟು ಕವಿತೆಗಳನ್ನು ರಚಿಸಿದ್ದು ಕಾಣುತ್ತೇವೆ. ಮನೆಯ ಮುಂದಿನ ಗಿಡ-ಮರಗಳಲ್ಲಿ, ಮನೆಯಲ್ಲೇ ಇರುವ ಫೋಟೋಗಳ ಹಿಂದೆ ಕಟ್ಟಿದ ಗುಬ್ಬಚ್ಚಿ ಗುಡಿನಲ್ಲಿ ಚಿಂವ್-ಚಿಂವ್ ಎನ್ನುವ ಕಲರವ, ತನ್ನ ತಾಯಿಯ ಬರುವಿಕೆಗಾಗಿ ಮರಿ ಹಕ್ಕಿಗಳು ಕಾಯುವುದನ್ನು ಮಕ್ಕಳು ಹಲವಾರುಬಾರಿ ನೋಡಿರುತ್ತಾರೆ. ಹೀಗೆ ನಿತ್ಯ ದೃಶ್ಯಗಳನ್ನು ವಸ್ತುವಾಗಿಸಿಕೊಂಡು ರಂಗನಾಥರು ಕಟ್ಟಿಕೊಟ್ಟಿರುವ ಕವಿತೆಗಳು, ಯಶಸ್ವೀ ಮಕ್ಕಳ ಕವಿತೆಗಳಾಗಿ ಇಲ್ಲಿ ಮೂಡಿಬಂದಿವೆ.
ಹಿಡಿದ ಕೈಗಳ ಬಿಡದೇ ಕಾಯುವೆ
ಭವಿತವ್ಯವ ಹಸನು ಮಾಡುವೆ..
ಹೆಸರು ನನ್ನದುಅಕ್ಕರ ಬರೆವುದು
ಬಣ್ಣ ಬಣ್ಣದ ಬಳಪವು ನಾನು||
ಎಂದು ಹೇಳುತ್ತ, ಬಳಪದ ಕಾರ್ಯವನ್ನು …ಕೈ ಬಿಡದೇ ಕಾಯುವೆ ಎಂಬ ಆತ್ಮ ವಿಶ್ವಾಸವನ್ನು “ಬಳಪ” ಕವಿತೆಯ ಮೂಲಕ ಮಕ್ಕಳಲ್ಲಿ ಬಳಪದಿಂದ ಬರೆಯುವಂತೆ ಹುರಿದುಂಬಿಸುತ್ತಾರೆ. ಇಂತಹ ಕವಿತೆಗಳು ಬಾಲ್ಯವನ್ನು ಮೆಲುಕು ಹಾಕುವಂತೆ ಮಾಡುತ್ತವೆ.
ಒಟ್ಟಾರೆ ರಂಗನಾಥರವರು ಮಕ್ಕಳಿಗೆ ಇಷ್ಟವಾಗುವ ಪ್ರಾಣಿ,ಪಕ್ಷಿ,ಗಿಡ-ಮರ, ಬಳ್ಲಿ, ತರಕಾರಿ, ಆಹಾರ, ಪರಿಸರವನ್ನು ಕವಿತೆಗಳ ವಿಷಯವಾಗಿ ಆಯ್ಕೆ ಮಾಡಿಕೊಂಡು, ಸೊಗಸಾಗಿ ಮಕ್ಕಳಿಗೆ ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕೆಲವು ಕವಿತೆಗಳು ಮಕ್ಕಳ ಮನಸ್ಸಿಗೆ ತಾಕದಂತಹವೂ ಇವೆ. ಮಕ್ಕಳಿಗಾಗಿ ಬರೆಯುವ ಮುನ್ನ, ಯಾವ ವಯಸ್ಸಿನ ಮಕ್ಕಳಿಗೆ ಎಂಬುದನ್ನು ಅರಿತು ಬರೆದರೆ ಸರಿಯಾದ ಮಕ್ಕಳ ಕವಿತೆಗಳು ಹೊರಹೊಮ್ಮಲು ಸಾಧ್ಯ.ಇಲ್ಲದಿದ್ದರೆ ಮೊದಲ ನುಡಿ ಅಂಗನವಾಡಿ ಮಕ್ಕಳಿಗೆ ಎಟುಕುವಂತಿದ್ದು, ಎರಡನೇ ನುಡಿ ಪ್ರಾಥಮಿಕ ಶಾಲಾ ಮಕ್ಕಳ ಮಟ್ಟಕ್ಕೆ ಇರುವಂತಾಗಿ, ಅಪೂರ್ಣವಾದ ಸಾಹಿತ್ಯವಾಗಿ ಬಿಡುತ್ತದೆ.
ಈ ಸಂಕಲನದ ತಲೆಬರಹದ ಕವಿತೆಯಾದ “ದೇವರ ತುಂಟಾಟ“ ಕವಿತೆಯಲ್ಲಿ ಮಕ್ಕಳನ್ನು ದೇವರೆಂಬಂತೆ ಅರ್ಥಮಾಡಿಕೊಂಡು, ಅವರ ತುಂಟಾಟಗಳನ್ನು ಕವಿತೆಯನ್ನಾಗಿಸುವಲ್ಲಿ ಕವಿಯು ಯಶಸ್ವಿಯಾಗಿದ್ದಾನೆ.
ಮಣ್ಣಿನೊಳಗೆ ಹೊರಳಾಡಿ ನಗುವೆ
ಕೆಸರೆಂದರೆ ಓಡಿ ಮುಳುಗುವೆ||
ಮೈಯನು ರಾಡಿ ಮಾದಿಕೊಳ್ಳುವೆ
ಸುಮ್ಮನೆ ಕೂರದೇ ಓಡುತಲಿರುವೆ.
ಸುಂದರವಾಗಿ ಮುದ್ರಣಗೊಂಡಿರುವ ಈ “ದೇವರ ತುಂಟಾಟ” ಮಕ್ಕಳ ಕವಿತಾ ಸಂಕಲನವು, ನಾಡಿನ ಹೆಚ್ಚು ಹೆಚ್ಚು ಶಿಕ್ಷಕರ ಕೈಗೆ ಸಿಕ್ಕು, ಮಕ್ಕಳಿಗೆ ಇಷ್ಟವಾಗುವ ಇಲ್ಲಿಯ ಹಲವಾರು ಕವಿತೆಗಳು ಮಕ್ಕಳ ಮನಸನ್ನು ಅರಳಿಸುವಂತಾಗಲಿ ಎಂದು ಹಾರೈಸುತ್ತ, ರಂಗನಾಥರು ಇನ್ನಷ್ಟು ಒಳ್ಳೆಯ ಮಕ್ಕಳ ಕವಿತೆಗಳನ್ನು ರಚಿಸುವಂತಾಗಲಿ ಎಂದು ಆಶಿಸುವೆ.
**Note: IIP Store is the best place to buy books published by Iterative International Publishers. Price at IIP Store is always less than Amazon, Amazon Kindle, and Flipkart.
COMMENTS
No Review found for book with Book title. DEVARA THUNTATA